ಈ ಹೆಸರು ಇಂಗ್ಲಿಷ್ ಲಿಪಿಯಲ್ಲಿ ಸಾಧಾರಣವಾಗಿ Rabindra Debbarma ಎಂದು ಬರೆಯಲ್ಪಡುತ್ತದೆ. ಆದರೆ ಈ ಬರವಣಿಗೆ ಪೂರ್ವೋತ್ತರ ಭಾರತದ ಭಾಷೆಗಳ ಉಚ್ಚಾರಣೆ, ಕಾಗುಣಿತ, ವರ್ಣವಿನ್ಯಾಸಗಳನ್ನು ಕುರಿತಿದ್ದಲ್ಲ. ಇದು ಈಶಾನ್ಯ ಭಾರತದಲ್ಲಿನ ತ್ರಿಪುರ ರಾಜ್ಯದ ಗೆಳೆಯನೊಬ್ಬನ ಬದುಕು ಮತ್ತು ಸಾವನ್ನು ಕುರಿತು.
ರವೀಂದ್ರ ೧೩ ನವೆಂಬರ್ (ಶನಿವಾರ) ಬೆಳಿಗ್ಗೆ ತ್ರಿಪುರ ರಾಜಧಾನಿ ಅಗರ್ತಲದಲ್ಲಿನ ಜಿ.ಬಿ. ಸರಕಾರಿ ಆಸ್ಪತ್ರೆಯಲ್ಲಿ ತೀರಿಕೊಂಡ. ರವೀಂದ್ರನ ಸಾವು ಅಕಾಲ ಸಾವು. ಸತ್ತಾಗ ವಯಸ್ಸು ಐವತ್ತೈದು ವರುಷಗಳು ಮಾತ್ರ. ನನಗಿಂತಾ ಇಪ್ಪತ್ತು ವರುಷಗಳಿಗೂ ಮೀರಿ ಸಣ್ಣವನು. ಆದರೆ ಮೃತ್ಯುವಿನ ಬಗ್ಗೆ ಸಕಾಲಿಕ, ಅಕಾಲಿಕ ಅನ್ನುವುದು ಸಾಧ್ಯವೇ? ಹಿರಿಯಕ್ಕನ ಹೊರತು ನನ್ನ ತಂದೆತಾಯಿಯರ ಸಂಸಾರದಲ್ಲಿ ತೀರಿಕೊಂಡವರೆಲ್ಲರೂ, ತಂದೆ ತಾಯಿ ಸಹ, ನನ್ನ ಈಗಿನ ವಯಸ್ಸಿಗಿಂತ ಕಡಿಮೆ ವಯಸ್ಸಿನಲ್ಲೇ ತೀರಿಕೊಂಡರು. ಮೃತ್ಯುವಿನ ಸಮಯದಲ್ಲಿ ಅಪ್ಪನ ವಯಸ್ಸು ಅರವತ್ಮೂರು. ಅಮ್ಮನ ವಯಸ್ಸು ಎಪ್ಪತ್ತೆರಡು. ನನ್ನ ವಯಸ್ಸು ಈಗ ಎಪ್ಪತ್ತೈದು. ಆದರೆ ನಾನಂತೋ ನನ್ನ ಎಪ್ಪತ್ತನೇ ವಯಸ್ಸಿನಲ್ಲಿ ಒಂದು ಮಾರಾತ್ಮಕ ಖಾಯಿಲೆ ತಿಂದು ಅದರಿಂದ ಪಾರಾಗಿದ್ದೇನೆ ಅನ್ನುವ ಭ್ರಮೆಯಲ್ಲಿ ಉಳಿದಿರುವ ಪ್ರತಿ ರಾತ್ರಿಯೂ ಮಲಗುವ ಮುಂಚೆ ಆ ರಾತ್ರಿಯ ನಿದ್ದೆಯಲ್ಲೇ ಅನಾಯಾಸವಾಗಿ ಸಾಯಬಹುದೇನೋ ಎಂಬ ಆಸೆಆಕಾಂಕ್ಷೆಗಳಲ್ಲೇ ಮಲಗುತ್ತೇನೆ. ನನಗಿಂತ ಸಣ್ಣವನಾಗಿದ್ದ ಇನ್ನೊಬ್ಬ ಗೆಳೆಯ ಮತ್ತು ಒಂದುಕಾಲದ ಸಹಕರ್ಮಿ Economic and Political Weeklyಯ ಸಂಪಾದಕ ಕೃಷ್ಣರಾಜ ಸಹ ಅಂತಹ ಅನಾಯಾಸ ಮರಣ ದೊರೆಕಿಸಿಕೊಂಡ. ನನಗಿಂತ ಸಣ್ಣವರಾದ ಕೆಲವಾರು ಮಿತ್ರರ ಸಾವು ಕಂಡಿದ್ದೇನೆ. ನನ್ನ ದೌರ್ಭಾಗ್ಯ ಏನೆಂದರೆ ಯಮರಾಯನ ದೃಷ್ಟಿ ನನಗಿಂತ ಸಣ್ಣವರಾದ, ನನಗಿಂತ ಮೀರಿ ಈ ಸಮಾಜಕ್ಕೆ ಬೇರೆಬೇರೆ ರೀತಿಯಲ್ಲಿ ಕೆಲಸಕ್ಕೆ ಬರಬಹುದಾಗಿದ್ದ ಕೃಷ್ಣರಾಜನಂತಹ, ರವೀಂದ್ರನಂತಹ, ಗೆಳೆಯರ ಮೇಲೆ. ಕೆಲಸಕ್ಕೆ ಬಾರದ, ಅವನ ಬಾಗಿಲಲ್ಲೇ ವರುಷಗಟ್ಟಲೆ ಕಾಯುತ್ತಿರುವ ಈ ಮುದಿಯನ ಮೇಲೆ ಯಾಕೋ ಆ ಕೃಪಾಕಟಾಕ್ಷ ಇದುವರೆಗೂ ಬೀರಿಲ್ಲ. ಇರಲಿ, ಈ ನನ್ನ ಜಗಳ ಆ ಯಮರಾಯನನ್ನು ಭೆಟ್ಟಿಯಾದಾಗ ಮುಂದುವರಿಸುತ್ತೇನೆ.
ರಬೀಂದ್ರ ದೇವವರ್ಮ ತ್ರಿಪುರದ ಬುಡಕಟ್ಟು ಜನಾಂಗದವನು. ಹೆಸರಿನಲ್ಲಿ ತ್ರಿಪುರದ ರಾಜಮನೆತದವರ ಉಪಾಧಿಯನ್ನು ಹೊಂದಿದ್ದರೂ ವಾಸ್ತವದಲ್ಲಿ ಅವನು ಹಿಂದೂಸಮಾಜದಲ್ಲಿ ಅತಿ ಕನಿಷ್ಠ ಮತ್ತು ಆರ್ಥಿಕ ದೃಷ್ಟಿಯಿಂದ ಕಡು ಬಡವರಾಗಿರುವ ಮತ್ತು ಹಾಗೆಂದು ಪರಿಗಣಿತರೂ ಆಗಿರುವ ಅನುಸೂಚಿತ ಜನಜಾತಿ ಸಮಾಜದವನಾಗಿದ್ದ. ಇಂಗ್ಲಿಷ್ ನಲ್ಲಿ Scheduled Tribe ಎಂದು ಪರಿಚಯಿಸಲಟ್ಟಿರುವ ಜನಾಂಗ. ಭಾರತದ ಬೇರೆಲ್ಲ ಪ್ರಾಂತ್ಯಗಳಂತೆ ತ್ರಿಪುರದಲ್ಲೂ ಆ ಜನಾಂಗದ ಒಂದು ಸಣ್ಣ ಮತ್ತು ಸೀಮಿತ ವರ್ಗ ಸ್ವಲ್ಪ ಮಟ್ಟಿಗೆ ಆರ್ಥಿಕ ಮತ್ತು ಸಾಮಾಜಿಕ ಕ್ಷಮತೆ ಸಾಧಿಸಿಕೊಂಡಿದೆ. ಅಲ್ಲಿನ ಒಂದು ಕಾಲದ ರಾಜಮಹಾರಾಜರು, ಇಂದಿನ ಆ ರಾಜವಂಶಸ್ಥರು ಮತ್ತು ಕೆಲವಾರು ದೊಡ್ಡ ಮನುಷ್ಯರು ತಮ್ಮನ್ನು ದೇವವರ್ಮ ಎಂದು ಪರಿಚಿಯಿಸಿಕೊಳ್ಳುತ್ತಾರೆ. ಆದರೆ ಇಂಥವರ ಸಂಖ್ಯೆ ಬಹಳ ಕಮ್ಮಿ. ಒಬ್ಬ ಭಾರತ ವಿಖ್ಯಾತ, ಇಷ್ಟರಲ್ಲೇ ವಿಶ್ವವಿಖ್ಯಾತನೂ ಆಗಬಹುದಾಗಿರುವ ಸೋಮದೇವ ದೇವವರ್ಮ ಒಂದು ಕಡೆ, ಇನ್ನೊಂದು ಕಡೆ ಅದೇ ಉಪಾಧಿಯ, ಆದರೆ ತಮ್ಮ ಹೆಸರೂ ಪರಿಚಿಯಿಸುಕೊಳ್ಳಲಾರದ ಹತ್ತಾರುಸಾವಿರ ನತದೃಷ್ಟ ದೇವವರ್ಮರು. ರವೀಂದ್ರ ಈ ಎರಡನೆಯ ದರ್ಜೆಯವನು .
ಅವನ ಪರಿಚಯ ನನಗೆ ಆಗಿದ್ದು ಸನ್ ಸಾವಿರದೊಂಭೈನೂರೆಂಭತ್ನಾಲ್ಕರ ಮಾರ್ಚ್ ಮಾಸದಲ್ಲಿ. ಆಗ ಪೂರ್ವೋತ್ತರ ಭಾರತದಲ್ಲಿ ದಿ ಹಿಂದು ದಿನಪತ್ರಿಕೆಯ ಬಾತ್ಮೀದಾರನಾಗಿದ್ದೆ. ಎಂಟು ವರುಷಗಳು ಮುಂಬೈನಲ್ಲಿ ವಾಸಮಾಡಿದನಂತರ ಸನ್ ಸಾವಿರದೊಂಭೈನೂರೆಂಭತ್ಮೂರನೇ ಇಸವಿ ಜೂನ್ ನಲ್ಲಿ ಗುವಾಹತಿಗೆ ಮತ್ತೆ ವಾಪಸಾಗಿದ್ದೆ. ಕೆಲಸದ ಪ್ರಯುಕ್ತ ಪೂರ್ವೋತ್ತರ ಭಾರತದ ಎಲ್ಲ ಭಾಗಗಳಲ್ಲೂ ಅಡ್ಡಾಡುತ್ತಿದ್ದೆ. ಆದಕ್ಕೆ ಮುಂಚೆ ಸನ್ ಸಾವಿರದೊಂಭೈನೂರೆಪ್ಪತ್ತೊಂದರ ಮೇ ಮಾಸದಲ್ಲಿ ಅಂದಿನ ಪೂರ್ವಪಾಕಿಸ್ತಾನದ ಆಂತರಿಕ ವಿಕ್ಷೋಭ ಗಡಿಯ ಇತ್ತ ಕಡೆ ಏನು ಪರಿಣಾಮ ಮಾಡುತ್ತಿದೆ, ಇದನ್ನು ತಿಳಿದುಕೊಳ್ಳುವ ಕುತೂಹಲದಲ್ಲಿ ತ್ರಿಪುರದ ರಾಜಧಾನಿ ಅಗರ್ತಲ ಮತ್ತು ಅಸಂನ ಕರೀಂಗಂಜ್ ನ ಕೆಲವು ಭಾಗಗಳಲ್ಲಿ ಪಯಣಿಸಿದ್ದೆ. ಆದರೆ ಆ ದಿನಗಳ ಪಯಣದ ಸಮಯದಲ್ಲಿ ಅಲ್ಲಿನ ಭಾಷೆ, ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ನನ್ನ ತಿಳುವಳಿಕೆ ಏನೇನೂ ಇರಲಿಲ್ಲ. ಸುಮ್ಮನೆ ಸುತ್ತಾಡಿ ವಾಪಸಾಗಿದ್ದೆ.
ಸನ್ ಸಾವಿರದೊಂಭೈನೂರೆಂಭತ್ನಾಲ್ಕರದು ಕೆಲಸದ ಪಯಣ. ಅದು ತ್ರಿಪುರದ ಈಚಿನ ಇತಿಹಾಸದಲ್ಲಿ ಒಂದು ಉದ್ವಿಜ್ಞ ಸಮಯ. ಆದರೆ ಈ ಉದ್ವಿಜ್ಞತೆ ಅಂದಿನದಾಗಿರಲಿಲ್ಲ. ಸನ್ ಸಾವಿರದೊಂಭೈನೂರೆಂಭತ್ತರ ಜೂನ್ ಮಾಸದಲ್ಲಿ ತ್ರಿಪುರದಲ್ಲಿ ಒಂದು ದಂಗೆ ಮತ್ತು ಅದರ ಪರಿಣಾಮದಂತೆ ರಕ್ತಕಾಂಡ ಜರುಗಿತು. ಅಧಿಕೃತ ಮತ್ತು ಸರಕಾರೀ ಸೂತ್ರಗಳ ಪ್ರಕಾರ ಆ ದಂಗೆಯಲ್ಲಿ ಕೊಲ್ಲಲ್ಪಟ್ಟವರು ಒಂದುಸಾವಿರದಮುನ್ನೂರಕ್ಕೂ ಮೀರಿ. ಇಪ್ಪತ್ತುಸಾವಿರಕ್ಕೂ ಮೀರಿ ಮನೆ ಗುಡಿಸಿಲುಗಳು ನಾಶವಾಗಿತ್ತು. ಕೋಟ್ಯಾಂತರ ರೂಪಾಯಿಗಳ ಸಂಪತ್ತು ಲೂಟಿಯಾಯಿತು.
ದಂಗೆಯ ರಕ್ತಕಾಂಡದ ಹಿನ್ನೆಲೆ ಅತಿ ಸೂಕ್ಷ್ಮ ಮತ್ತು ಜಟಿಲ. ಮೇಲೆ ಮೇಲೆ ಕಾಣಲಿಕ್ಕೆ ಅದು ಒಂದುಕಾಲದಲ್ಲಿ ತ್ರಿಪುರದ ಬಹುಸಂಖ್ಯಾತರಾಗಿದ್ದ ಆದರೆ ಈಗ ಅಲ್ಪಸಂಖ್ಯಾತಿಗಳಾಗಿರುವ ಬುಡಕಟ್ಟುಜನಾಂಗದ ಮೂಲನಿವಾಸಿಗಳು, ಮತ್ತು ಪೂರ್ವಬಂಗಾಳ/ಪೂರ್ವಪಾಕಿಸ್ತಾನದಿಂದ ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ವಲಸೆಗಾರರಾಗಿ ಮತ್ತು ಸ್ವಾತಂತ್ಯ್ರೋತ್ತರ ಶರಣಾರ್ಥಿಗಳಂತೆ ಬಂದು ತ್ರಿಪುರದಲ್ಲಿ ನೆಲೆಸಿದ್ದ ಮತ್ತು ಈಗ ಬಹು ಸಂಖ್ಯಾತಿಗಳಾಗಿರುವ ಮುಸ್ಲಿಮ ಮತ್ತು ಹಿಂದು ಬಂಗಾಲಿಗಳ ಮಧ್ಯೆ ಜುಜುಬಿ ಕಾರಣದ ಕಲಹವೊಂದು ಮಿತಿಮೀರಿ ರಕ್ತಪಾತಭರಿತ ದಂಗೆಯಾಗಿ ಪರಿವರ್ತಿಸಿದಂತೆ ತೋರುತ್ತಿತ್ತು. ಆದರೆ ಆ ದಂಗೆಯ ಮೂಲಕಾರಣಗಳು ಮತ್ತು ಅದು ತೆಗೆದುಕೊಂಡ ಅತಿಹಿಂಸಾತ್ಮಕ ರೂಪಗಳ ಬಗ್ಗೆ ಇನ್ನೂ ಅನೇಕ ಕಾರಣಗಳಿವೆ, ಊಹಾಪೋಹಗಳೂ ಇವೆ. ಇವುಗಲಲ್ಲಿ ಅತಿಮುಖ್ಯವಾದ ಕಾರಣಗಳು: ಒಂದು, ಅಲ್ಲಿನ ಒಂದು ಕಾಲದಲ್ಲಿ ಬಹುಸಂಖ್ಯಾತರಾಗಿದ್ದ ಮೂಲ ಬುಡಕಟ್ಟುಜನಾಂಗದವರು ಅಲ್ಪ ಸಂಖ್ಯಾತರಾಗಿಬಿಟ್ಟಿದ್ದು; ಮತ್ತು ಎರಡು, ಈ ಪರಿವರ್ತನೆಯ ಮೂಲ ಪರಿಣಾಮಗಳಿಗೆ ನಿಕಟಸಂಬಂಧವಿದ್ದಂತೆ ಆ ಮೂಲನಿವಾಸಿಗಳು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದು.
ಏನೇ ಇರಲಿ ಆ ವಿಕ್ಷೋಭದ ತಾತ್ಪರ್ಯ ಆ ಪ್ರಾಂತ್ಯದಲ್ಲಿನ ಮೂಲನಿವಾಸಿಗಳು, ಮತ್ತು ಪೂರ್ವ ಪಾಕಿಸ್ತಾನದ ಧಾರ್ಮಿಕ ಅಸಹಿಷ್ಣತೆಯಿಂದ ಮತ್ತು ಕಡುಬಡತನದಿಂದ ಪಾರಾಗಲೇಬೇಕಾದ ಒತ್ತಡಕ್ಕೆ ಬಾಧ್ಯರಾಗಿ ತಲೆತಲಾಂತರದಿಂದ ವಾಸವಾಗಿದ್ದ ಮನೆಭೂಮಿ ಬಿಟ್ಟು ಬಂದಿದ್ದ ಶರಣಾರ್ಥಿಗಳು, ವಲಸೆಗಾರರು, ಇವರುಗಳ ಮಧ್ಯೆ ಇದ್ದ ಮೈತ್ರಿ, ಸಾಮಾಜಿಕ ಸಹೃದಯತೆ, ಪರರ್ಸ್ಪರ ಸಹಿಷ್ಣುತೆ, ಇವುಗಳು ಮಾಯವಾಗಿ ನಿನ್ನೆ ಮಿತ್ರರಾಗಿದ್ದ ಗುಂಪುಗಳು ಇಂದು ಒಬ್ಬರನ್ನೊಬರು ಕೊಲ್ಲುವ ಹತ್ಯಾಕಾರಿಗಳಾಗಿದ್ದರು. ಆಚಿನವರಿಗೆ, ಏಕೆ ಅಲ್ಲಿನವರಿಗೂ ಅರ್ಥವಾಗದ ಭಯಂಕರ ರಕ್ತಕಾಂಡ.
ಇಂತಹ ವಿಕ್ಷೋಭ ಇದ್ದಕ್ಕಿದ್ದಂತೆ ಎಂದೆಂದೂ ಉದ್ಭವಿಸುವುದಿಲ್ಲ. ಅದರ ಮೂಲಕಾರಣಗಳೇನಿರಬಹುದು, ಇದನ್ನು ಅರ್ಥ ಮಾಡಿಕೊಳ್ಳಲು ಪತ್ರಕಾರನಾಗಿ ನನ್ನ ತ್ರಿಪುರದ ಪ್ರಥಮ ಭೇಟಿಯ ಸಮಯದಲ್ಲಿ ಸುಮಾರು ಮೂರು ವಾರ ತಿರುಗಾಡಿದೆ. ಆ ತಿರುಗಾಟದಲ್ಲಿ ಅನೇಕ ಸಮಸ್ಯೆ ಕಷ್ಟಗಳನ್ನು ಎದುರಿಸಬೇಕಾಯಿತು. ನಕಾಶೆಯಲ್ಲಿ ನೋಡಲು ಪುಟ್ಟ ರಾಜ್ಯ. ಆದರೆ ಅಲ್ಲಿನ ದುರ್ಗಮ ಬೆಟ್ಟಗಳು, ಭೋರೆಂದು ಹರಿಯುವ ನದಿಗಳು, ದಟ್ಟ ಕಾಡುಗಳು, ಕಾಲುದಾರಿಗಳು, ಇವು ಯಾವವೂ ನಕಾಶೆಯಲ್ಲಿ ಕಾಣುವುದಿಲ್ಲ. ರಾಜ್ಯದ ಬಸ್ ಸಾರಿಗೆ ವ್ಯವಸ್ಥೆ ಅಂದಿನ ದಿನಗಳಲ್ಲಿ ಒಂದು ದೊಡ್ಡ ಮುಖ್ಯ ರಸ್ತೆ ಮತ್ತು ನಾಲ್ಕೈದು ಸಣ್ಣ ಪುಟ್ಟ ರಸ್ತೆಗಳಿಗೆ ಮಾತ್ರ ಸೀಮಿತ. ರಾಜ್ಯದ ಮೂರರಲ್ಲಿ ಎರಡು ಭಾಗ ಆವರಿಸಿಕೊಂಡಿದ್ದ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ವಾಸವಾಗಿದ್ದ ಬುಡಕಟ್ಟುಜನಾಂಗದ ಹಳ್ಳಿಕಾಡುಗಳಲ್ಲಿ ಅಲೆಯುವುದು ಅಷ್ಟು ಸುಲಭವಿರಲಿಲ್ಲ. ಈ ಸಮಯದಲ್ಲಿ ರವೀಂದ್ರನ ಪರಿಚಯವಾಯಿತು. ಅವನು ನನ್ನಜೊತೆ ಸರಿಸಮಾನನಾಗಿ ಅಲೆದ. ತಂಗುವತಾಣ, ಪರಿಚಯವಿಲ್ಲದವರಿಂದ ದಿನಗಟ್ಟಲೆ ಬೈಸಿಕಲ್ಲು ಸಾಲ, ಊಟವಸತಿ, ಅವರಭಾಷೆಗಳ ತರ್ಜುಮೆ, ಗ್ರಾಮಗಳ ಹಿರಿಯರ ಜೊತೆ ಮಾತುಕತೆಯ ಅವಕಾಶ, ಇವೆಲ್ಲಕ್ಕೂ ಮೀರಿ ಅವನ ಮತ್ತು ಅವನಚಿಂತಾಧಾರೆಯ ಬುಡಕಟ್ಟುಜನಾಂಗದ ನಾಯಕರ ದೃಷ್ಟಿಭಂಗಿಯಲ್ಲಿ ಆ ದಂಗೆ ಮತ್ತು ಅದರ ಹಿಂದೆ ಅನೇಕ ವರುಷಗಳಿಂದ ಬೆಳೆಯುತ್ತಿದ್ದ ಆದರೆ ಲುಪ್ತವಾಗಿದ್ದ ಮನೋಮಾಲಿನ್ಯಗಳ ಮೂಲ ಕಾರಣಗಳು, ಇವುಗಳ ಬಗ್ಗೆ ತನ್ನ ಅಭಿಜ್ಞತೆಯನ್ನು ಉದಾರವಾಗಿ ಒಬ್ಬ ಸಹೃದಯ ಗೆಳೆಯನಂತೆ ಹಂಚಿಕೊಂಡಿದ್ದ.
ಸ್ವಾತಂತ್ರ್ಯಪೂರ್ವ ತ್ರಿಪುರ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಇಂದಿನ ಬಂಗ್ಲಾದೇಶದ ಕೊಮಿಲ್ಲ ಆ ದಿನಗಳಲ್ಲಿ ತಿಪ್ಪೇರ ಎಂದು ಪರಿಚಿತವಾಗಿತ್ತು. ಇವುಗಳ ಮಧ್ಯೆ ಬಹಳ ಹೊಂದಿಕೆ ಹೊಂದಾಣಿಕೆಯೂ ಇತ್ತು. ಈ ಪ್ರದೇಶದಲ್ಲಿನ ಕಮ್ಯುನಿಸ್ಟ್ ಚಳುವಳಿಯ ಅಂಗವಾಗಿದ್ದ ಗಣಮುಕ್ತಿ ಪರಿಷತ್ತು ಅಲ್ಲಿನ ಬುಡಕಟ್ಟು ಜನಾಂಗದವರನ್ನು ಆಕರ್ಷಿಸಿ ಅವರಿಂದ ಅಪಾರ ಬೆಂಬಲ ಸಂಪಾದಿಸಿಕೊಂಡಿತ್ತು. ಏಕೆಂದರೆ ಕಮುನಿಸ್ಟ್ ದಳ ಮತ್ತು ಗಣಮುಕ್ತಿ ಪರಿಷತ್ತೇ ಆ ಪ್ರಾಂತ್ಯದ ಜನ ಸಾಮಾನ್ಯರಮೇಲಿನ ದಬ್ಬಾಳಿಕೆಯ ಪ್ರತೀಕವಾಗಿದ್ದ ಜಮೀನ್ದಾರಿ ಪದ್ಧತಿಯ ವಿರುದ್ಧ ಹೋರಾಟ ನಡೆಸಿತ್ತು. ಈ ಕಾರಣಗಳಿಂದಾಗಿ ಸ್ವಾಭಾವಿಕವಾಗೇ ಕಮುನಿಸ್ಟ್ ಆಂದೋಲನ ಮತ್ತು ಕಮ್ಯುನಿಸ್ಟ್ ಪಕ್ಷ ಸ್ವಾತಂತ್ರ್ಯೋತ್ತರ ಕಾಲದಲ್ಲಿ ತ್ರಿಪುರದಲ್ಲಿ ಬಲವಾಗಿ ಬೇರುಬಿಟ್ಟಿತು. ಈ ರೀತಿ ಆಳವಾಗಿ ಬೇರೂರಿಕೊಳ್ಳಲು ಕುಮ್ಮಕ್ಕು ಕೊಟ್ಟಿದ್ದು ಕಮ್ಯುನಿಸ್ಟ್ ಚಿಂತಾಧಾರೆ ಮತ್ತು ಕಮ್ಯುನಿಸ್ಟ್ ಕಾರ್ಯಪ್ರಣಾಳಿಗಳಿಗೆ ಅಲ್ಲಿನ ಬುಡಕಟ್ಟು ಜನಾಂಗದವರ ಅಷ್ಟೇ ಆಳವಾದ ಬೆಂಬಲ.
ಇಂತಹ ಬೆಂಬಲವಿದ್ದರೂ ಕಮುನಿಸ್ಟ್ ಪಕ್ಷ ರಾಜ್ಯದಲ್ಲಿ ಅದಿಕಾರ ಸಂಪಾದಿಸಿಕೊಂಡಿರಲಿಲ್ಲ. ಸ್ವಾತಂತ್ರ್ಯೋತ್ತರದ ಕಾಲು ಶತಮಾನ ತ್ರಿಪುರದಲ್ಲಿ ಪ್ರಜಾಪ್ರಭುತ್ವಕ್ಕೆ ಬದಲಾಗಿ ದಿಲ್ಲಿಯರಾಜಪ್ರಭುತ್ವವೇ ಪರೋಕ್ಷವಾಗಿ ಅಧಿಕಾರ ಚಲಾಯಿಸಿತ್ತು. ತ್ರಿಪುರ ಭಾರತದ ಒಂದು ಪೂರ್ಣಾಂಗ ರಾಜ್ಯದ ಮಾನ್ಯತೆ ಸನ್ ಸಾವಿರದೊಂಭೈನೂರೆಪ್ಪತ್ತೆರಡರಲ್ಲಿ ದೊರಕಿಸಿಕೊಂಡರೂ ಈ ಜನಬೆಂಬಲ ಅಧಿಕಾರಬೆಂಬಲವಾಗಿ ಮಾರ್ಪಾಡಾಗಲಿಲ್ಲ. ಏಕೆಂದರೆ ಈ ಮಾನ್ಯತೆ ದೊರೆಕಿಸಿಕೊಂಡಾಗ ಅದು ತ್ರಿಪುರ ಜನತೆಗೆ ಕೇಂದ್ರದಲ್ಲಿ ಅಧಿಕಾರ ಚಲಾಯಿಸಿದ್ದ ಭಾರತೀಯ ಕಾಂಗ್ರೆಸ್ ನ ಉಡುಗರೆ ಎಂದು ಪ್ರಚಾರ ಚಲಾಯಿಸಿ ಕಾಂಗ್ರೆಸ್ ದಳ ರಾಜ್ಯದ ಪ್ರಥಮ ಚುನಾವಣೆಯಲ್ಲಿ ಜಯ ಗಳಿಸಿತು ಮತ್ತು ಸರಕಾರವನ್ನೂ ಘಟಿಸಿತು.
ಆದರೆ ಆ ಚುನಾವಣೆಯ ಫಲಿತಾಂಶ ರಾಜ್ಯದ ಜನಸಾಧಾರಾಣರ ಜನಮತವನ್ನು ಬಿಂಬಿಸಿರಲಿಲ್ಲ. ಇದು ಮರುಚುನಾವಣೆಯಲ್ಲಿ ಸ್ಪಷ್ಟವಾಯಿತು. ಭಾರತದ ಜನರಮೇಲೆ ಸರ್ವಾಧಿಕಾರವನ್ನು ಹೇರಲು ಯತ್ನಿಸಿದ್ದ ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸಿಸ್ಟ್) ಅರ್ಥಾತ್ ಸಿಪಿಐ(ಎಮ್) ನೇತೃತ್ವದ ವಾಮಮೋರ್ಚ ಅಧ್ಭುತ ಬಹುಮತ ಗಳಿಸಿ ಸರಕಾರ ಘಟಿಸಿತು. ಆ ಸರಕಾರದ ನಾಯಕ ಮತ್ತು ಮುಖ್ಯಮಂತ್ರಿ ನೃಪೇನ್ ಚಕ್ರವರ್ತಿ.
ರವೀಂದ್ರ ದೇವರ್ಮನಿಗೂ ಈ ವರ್ಷಾಂತರಗಳ ಹಿಂದಿನ ಕಟ್ಟೆ ಪುರಾಣಕ್ಕೆ ಏನು ಸಂಬಂಧ ಎಂದು ಕೇಳಬಹುದು. ನನಗೆ ಪರಿಚಯವಾದಾಗ ಅವನು ತ್ರಿಪುರ ಬುಡಕಟ್ಟು ಜನಾಂಗಗಳಿಗೆ ಮಾತ್ರ ಸೀಮಿತವಾದ ಮತ್ತು ಆ ಜನಾಂಗದವರನ್ನು ಅಲ್ಲಿನ ಅಜನಜಾತಿಯವರೊಡನೆ ಏನೇನೂ ಸಂಬಂಧವಿಲ್ಲದ ಬೇರೊಂದು ಜನರಂತೆ ಪರಿಗಣಿಸಿದ್ದ ತ್ರಿಪುರ ಉಪಜಾತಿ ಜನ ಸಮಿತಿ (TUJS) ಎಂದು ಪರಿಚಿಯಿಸಿಕೊಂಡಿದ್ದ ಪಕ್ಷವೊಂದರಲ್ಲಿ ಶಾಮೀಲಾಗಿ ಅದರ ನಾಯಕರಲ್ಲಿ ಒಬ್ಬನಾಗಿದ್ದ. ನಾನೋ, ಇಂದಿನಂತೆ ಅಂದೂ ಮಾರ್ಕ್ಸಿಸ್ತ್ -ಕಮ್ಯೂನಿಸ್ಟ್ ಮನೋಪ್ರವೃತ್ತಿಯವನು. ಇದನ್ನು ಎಂದೂ ಮುಚ್ಚಿಟ್ಟಿರಲಿಲ್ಲ. ಅವನಿಗೆ ನನ್ನ ಈ ಮನೋಪ್ರವೃತ್ತಿ ಮೊದಲಬಾರಿಗೆ ಮನದಟ್ಟಾದಾಗ ಮುಂಚೆಮುಂಚೆ ಸ್ವಲ್ಪ ಸಂಕೋಚಪಟ್ಟಿಕೊಂಡ. ನಂತರ ಸಂಕೋಚಕ್ಕಿಂತಾ ಕುತೂಹಲ ಹೆಚ್ಚಾಯಿತು. ತ್ರಿಪುರದವರು, ಅದರಲ್ಲೂ ಅಲ್ಲಿನ ಬಡ ಬುಡಕಟ್ಟಿನ ಜನಾಂಗದವರು ಕಮ್ಯುನಿಸ್ಟರಾಗಬಹುದು. ಇದು ಸಹಜವೂ ಅಹುದು. ಆದರೆ ನನ್ನಂತಹ ಶಿಕ್ಷಿತ, ಕಡುಬಡವನಲ್ಲದವನು? ಇದು ಅವನ ಮುಗ್ಧ ಸಂದಿಗ್ಧತೆಯೋ, ಅಥವಾ ಅವನ ಗಹನವಾದ ತಿಳುವಳಿಕೆಯೋ, ನನಗೆ ಇಂದೂ ಅರ್ಥವಾಗಿಲ್ಲ. ಆದರೆ ಅದರ ಪರಿಣಾಮ ನಮ್ಮಿಬ್ಬರ ಮಧ್ಯೆ ಯಾವಾಗಲೂ ಒಬ್ಬರೊಬ್ಬರ ಮನೋಭಾವವನ್ನು ಅರಿಯುವ ಪ್ರಯತ್ನ, ಕೊನೆಮೊದಲಿಲ್ಲದ, ಬಾಯಿ ನಾಲಿಗೆ ದಣಿದಣಿಯುವವರೆಗೂ ಮಾತು ಕತೆ, ಚರ್ಚೆ.
ಆವನು ನನ್ನಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದನೋ ನಾನರಿಯೆ. ಆದರೆ ರವಿಂದ್ರನ ಬಗ್ಗೆ ನಾವು ಭೆಟ್ಟಿಯಾದಾಗಲೆಲ್ಲ ನನ್ನ ಕುತೂಹಲ ಎಂದಿನಂತೆ. ಈಗ ಅವನು ತೀರಿಕೊಂಡನಂತರವೂ ಅವನಂತಹ ಕಮ್ಯುನಿಸ್ಟ್ ಪರಿವಾರದವನು ಏಕೆ ಅಂತಹ ಕಟ್ಟರ್ ಬುಡಕಟ್ಟುಜನಾಂಗದ ಜಾತೀಯತಾವಾದಿಯಾದ, ಒಬ್ಬ ಕಟ್ಟರ್ ಟ್ರೈಬಲ್ ನ್ಯಾಷನಲಿಸ್ಟ್ ಆದ, ಒಮ್ಮೆ (೧೯೮೮-೯೩) ಕಾಂಗ್ರೆಸ್ ಜೊತೆ ಕೈಸೇರಿಸಿ ತ್ರಿಪುರ ಉಪಜಾತಿ ಯುವ ಸಮಿತಿಯ ಉಮ್ಮೀದುವಾರನಂತೆ ಮಂತ್ರಿಯೂ ಆಗಿದ್ದ, ಇವುಗಳ ಬಗ್ಗೆ ನನ್ನ ಕುತೂಹಲ ಎಂದಿನಂತೆ.
ಅವನ ಈ ಪರಿವರ್ತನೆಗೆ (ಅದು ಪರಿವರ್ತನೆ ಅನ್ನುವ ನನ್ನ ತಿಳುವಳಿಕೆ ಸರಿಯಾಗಿದ್ದರೆ) ಎರಡು ಕಾರಣಗಳಿರಬಹುದು. ಒಂದು, ಪ್ರತಿಯೊಂದು ಪೀಳಿಗೆಯಲ್ಲೂ ಇರುವ ತಲೆಮಾರುಗಳ ನಡುವಿನ ಪೈಪೋಟಿ, ಹಳೆಯ ವಿಶ್ವಾಸ ನಂಬಿಕೆಗಳನ್ನು ತಿರಸ್ಕರಿಸಿ ಹೊಸದೊಂದು ದಾರಿಯಲ್ಲಿ ಹೋಗುವ ಹೊಸ ಪೀಳಿಗೆಯ ಪ್ರವೃತ್ತಿ. ಇದು ನನಗೆ ಚೆನ್ನಾಗಿ ಮನದಟ್ಟಾಗುತ್ತದೆ. ನನ್ನ ವ್ಯಕ್ತಿಗತ ಜೀವನದಲ್ಲೇ ಇಂತಹ ದ್ವಂದ್ವವನ್ನು ಕಾಣುತ್ತೇನೆ. ಆದರೆ ರವೀಂದ್ರನಲ್ಲಿ ಅವನ ಹಿರಿಯ ಪೀಳಿಗೆಯವರ ಬಗ್ಗೆ ವ್ಯಕ್ತಿಗತ ಗೌರವ ಇದ್ದರೂ ಅವರ ರಾಜಕೀಯದ ಬಗ್ಗೆ ತಿರಸ್ಕಾರಕ್ಕಿಂತ ದ್ವೇಷ ಹೆಚ್ಚಾಗಿತ್ತು. ಎರಡನೆಯ ಕಾರಣ, ಪ್ರಾಯಶಃ, ಅಲ್ಲಿನ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದನಂತರ ಅನುಸರಿಸಿದ ರಾಜಕೀಯ ಧೋರಣೆ ಇದ್ದಿರಬಹುದು. ಒಮ್ಮೆ ಅಧಿಕಾರ ಗ್ರಹಿಕೊಂಡನಂತರ ಆ ಅಧಿಕಾರವನ್ನು ಕಾಪಾಡಿಕೊಂದು ಅದರ ಆಶ್ರಯದಲ್ಲೇ ಪಕ್ಷದ ಚಿಂತಾಧಾರೆ, ಕಾರ್ಯಕ್ರಮವನ್ನು ಮುಂದಕ್ಕೆ, ಮೇಲಕ್ಕೆ ತೆಗೆದುಕೊಂಡೊ ಹೋಗಬೇಕು, ಇದಲ್ಲದೆ ಬೇರೆ ದಾರಿ ಇಲ್ಲವೇ ಇಲ್ಲ, ಅನ್ನುವ ಚಿಂತಾಧಾರೆ.
ಇದು ಇಂದಿನ ಸಮಸ್ಯೆ ಅಲ್ಲ. ಚಾರಿತ್ರಿಕವಾಗಿ ಯಾವುದೇ ವಿಪ್ಲವೀ ಪಕ್ಷ ಅಥವ ಪಂಗಡ ವರ್ಗಶತ್ರುಗಳು ಸುತ್ತಲೂ ಅಧಿಕಾರದಲ್ಲಿರುವ ಪರಿಸ್ಥಿತಿಯಲ್ಲಿ ಮತ್ತು ಪರಿವೇಶದಲ್ಲಿ ಜನಸಾಧಾರಣರ ವಿಶ್ವಾಸ ಗಳಿಸಿ ಅದನ್ನು ಚುನಾವಣೆಯೊಂದರಲ್ಲಿ ಬಹುಮತ ಗಳಿಸಿ ಅಧಿಕಾರ ಸಂಪಾದಿಸಿಕೊಂಡದ್ದೇ ಆದರೆ ತದನಂತರ ಸೂರ್ಯ ಮುಂಜಾನೆ ದಿನಂಪ್ರತಿದಿನವೂ ಉದಯವಾಗುವಂತೆ ಕೆಲವಾರು ತಾತ್ವಿಕ, ರಾಜನೈತಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ. ಇದರ ಪರಿಹಾರ ಯಾವುದೇ ಮಂತ್ರದಲ್ಲಾಗಲಿ, ಸೂತ್ರಭಾಷ್ಯಗಳಲ್ಲಾಗಲೀ ದೊರಕುವುದಿಲ್ಲ. ಹೋರಾಟದಲ್ಲೇ ಸಮಾಧಾನವನ್ನೂ ಹೊರತೆಗೆಯಬೇಕು.
ತ್ರಿಪುರದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಈ ಸಮಸ್ಯೆಯನ್ನು ಎದುರಿಸಿದೆ. ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಏಕೆಂದರೆ ಸಮಸ್ಯೆ ಅರ್ಥವಾದರೆ ಪರಿಹಾರ ಹೊರತೆರೆಯುವುದು ಅಷ್ಟು ಜಟಿಲವಲ್ಲ. ಆದರೆ ಇಂತಹ ಚಾರಿತ್ರಿಕ ತಾಳ್ಮೆ ತಮ್ಮ ಇರುವಿಕೆಯೇ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿದ್ದ ಪರಿಸ್ಥಿತಿಯಲ್ಲಿ ಅಲ್ಲಿನ ಬುಡಕಟ್ಟಿನ ಮೂಲನಿವಾಸಿಗಳಿಗೆ ಸಾಕಾಗಿಲ್ಲ. ಭಾಷ್ಯ ಸಮಸ್ಯೆಗಳನ್ನು ಇಂದಲ್ಲದಿದ್ದರೆ ಸುದೂರ ಭವಿಷ್ಯದಲ್ಲಾದರೂ ಪರಿಹರಿಸುತ್ತೆ ಅಂತ ಕೈ ತೊಳೆದುಕೊಂಡು ಸುಮ್ಮನೆ ಕೂತಿರುವ ತಾಳ್ಮೆ ಅವರದಲ್ಲ. ಈ ದ್ವಂದ್ವ ನನಗಿಂತ ಅಲ್ಲಿನ ಮೂಲನಿವಾಸಿಗಳಿಗೆ, ವಲಸೆಗಾರರಿಗೆ, ಶರಣಾರ್ಥಿಗಳಿಗೆ ಚೆನ್ನಾಗಿ ಗೊತ್ತು. ಸದ್ಯಕ್ಕಂತೂ ಮುವತ್ತು ವರುಷಗಳ ಹಿಂದಿನ ರಕ್ತಪಾತ ಮತ್ತೆ ಜರುಗಿಲ್ಲ. ಇದೇ ಒಂದು ಸಣ್ಣ ಸಮಾಧಾನ.
ಬರೆಯಲು ಬಹಳ ಪರಿಶ್ರಮಮಾಡಬೇಕಾಗಿದ್ದ ಈ ಪ್ರಬಂಧವನ್ನು ಕಾಮ್ರೇಡ್ ನೃಪೇನ್ ಚಕ್ರವರ್ತಿ ಒಮ್ಮೆ ನನಗೆ ಹೇಳಿದ ಮಾತುಗಳೊಡನೆ ಮುಗಿಸುತ್ತೇನೆ. ಈ ಮೇಲೆ ಉಲ್ಲೇಖಿಸಿರುವ ತಾತ್ವಿಕ ದ್ವಂದ್ವಗಳ ಬಗ್ಗೆ ಅವರಿಗಿಂತ ಹೆಚ್ಚು ತಿಳಿದವರು ಯಾರೂ ಇಲ್ಲ. ಇದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪಿಕೊಂಡಿದ್ದರು. ಆವರು ಇಂಗ್ಲಿಷ್ ನಲ್ಲಿ ಹೇಳಿದ್ದನ್ನು ನನ್ನ ದುರ್ಬಲ ಕನ್ನಡದಲ್ಲಿ ಬರೆದಿದ್ದೇನೆ:
“ಇಂದು ಇಲ್ಲಿನ ಮೂಲನಿವಾಸಿ ಬುಡಕಟ್ಟುಜನಾಂಗದವರು, ಒಂದು ಸಮಯದಲ್ಲಿ ನಮ್ಮವರೇ ಆಗಿದ್ದವರು, ಇಂದು ನಮ್ಮನ್ನು, ಅಂದರೆ ಕಮ್ಯುನಿಸ್ಟರನ್ನು, ವಿರೋಧಿಸುತ್ತಿದ್ದಾರೆ, ಅದರ ಅರ್ಥ ನಾವು ಒಂದು ಕಾಲದಲ್ಲಿ ಅವರ ಮಧ್ಯೆ ಉಳಿದು, ಬೆಳೆದು ಅವರನ್ನು ಸಂಘಟಿಸಿದ ಕಾರ್ಯ ಫಲಶೃತವಾಗಿದೆ. ಇದು ನಮ್ಮ ಸೋಲಲ್ಲ. ಇದು ಒಂದು ರೀತಿ ನಮ್ಮ ಜಯವೂ ಅಹುದು.”